ಪಿಟ್, ವಿಲಿಯಂ 2 -
ಕಿರಿಯ ಪಿಟ್. 1759-1806. ಚ್ಯಾಟಮಿನ ಮೊದಲನೆಯ ಅರ್ಲ್ ವಿಲಿಯಂ ಪಿಟ್ಟನ ಎರಡನೆಯ ಮಗ. ರಾಜನೀತಿಜ್ಞ. ಇಂಗ್ಲೆಂಡಿನ ಪ್ರಧಾನ ಮಂತ್ರಿ. (1783-1801). ಕೇಂಬ್ರಿಜಿನ ಎಂ.ಎ. ಪದವೀಧರ (1776). 1781 ರಲ್ಲಿ ಪಾರ್ಲಿಮೆಂಟ್ ಸದಸ್ಯನಾದ. ಲಾರ್ಡ್ ನಾರ್ತನ ಟೋರಿ ಮಂತ್ರಿಮಂಡಲವನ್ನು ತೀವ್ರವಾಗಿ ಟೀಕಿಸಿದನಾದರೂ ಸಂಪುಟದ ದರ್ಜೆಗಿಂತ ಕಡಿಮೆಯ ಅಧಿಕಾರವನ್ನೊಲ್ಲೆನೆಂದು ಹೇಳಿ 1782 ರಲ್ಲಿ ಷೆಲ್‍ಬರ್ನ್ ಸಂಪುಟದಲ್ಲಿ ಕೋಶಾಧ್ಯಕ್ಷನಾದ. ಷೆಲ್‍ಬರ್ನನ ಸರ್ಕಾರ 1783 ರಲ್ಲಿ ಉರುಳಿ ಬಿದ್ದಾಗ ಸಂಪುಟ ರಚಿಸಲು ಇವನಿಗೆ ಆಹ್ವಾನ ಬಂತು. ಆದರೆ, ಇವನು ಅದಕ್ಕೆ ಒಪ್ಪಲಿಲ್ಲ. ಪಾರ್ಲಿಮೆಂಟಿನ ಸುಧಾರಣೆಗೂ ಈಸ್ಟ್ ಇಂಡಿಯಾ ಕಂಪನಿಯ ಸನ್ನದಿನ ಬದಲಾವಣೆಗೂ ಈತ ತಂದ ವಿಧೇಯಕಗಳು ಬಿದ್ದು ಹೋದವು. 1783 ರ ಡಿಸೆಂಬರಿನಲ್ಲಿ ಫಾಕ್ಸ್-ನಾರ್ತ್ ಸಂಮಿಶ್ರ ಮಂತ್ರಿಮಂಡಲದ ವಜಾ ಆದಾಗ ಕೋಶಾಧ್ಯಕ್ಷನೂ ಖಜಾನೆಯ ಪ್ರಥಮ ಲಾರ್ಡನೂ ಪ್ರಧಾನಮಂತ್ರಿಯೂ ಆಗಿ ಅಧಿಕಾರ ವಹಿಸಿದ. ಸಂಪುಟದಲ್ಲಿದ್ದ ಕಾಮನ್ಸ್ ಸದಸ್ಯ ಇವನೊಬ್ಬನೇ ಇವನ ಸರ್ಕಾರದ ವಿರುದ್ಧವಾಗಿ ಮತಗಳು ಬಂದಾಗ್ಯೂ ಇವನು ಸಂಸತ್ತನ್ನು ವಿಸರ್ಜಿಸದೆ ಮುನ್ನಡೆದ. ಸಾರ್ವಜನಿಕಾಭಿಪ್ರಾಯ ತನ್ನ ಪರವಾಗಿ ಪರಿವರ್ತನೆಗೊಳ್ಳುವವರೆಗೂ ತಡೆದು ನಡೆಸಿದ ಚುನಾವಣೆಯಲ್ಲಿ (1784) ಪಿಟ್ಟನಿಗೆ ಹೆಚ್ಚಿನ ಬಹುಮತ ದೊರಕಿತು. ಇವನು ಬ್ರಿಟಿಷ್ ಸರ್ಕಾರದ ಹಣಕಾಸನ್ನು ಸುವ್ಯವಸ್ಥಿತಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡ. ಈಸ್ಟ್ ಇಂಡಿಯಾ ಕಂಪನಿಗೆ ಹೊಸ ಸಂವಿಧಾನ ಜಾರಿಗೆ ಬಂತು. ಆದರೆ ಪಾರ್ಲಿಮೆಂಟಿನ ಸುಧಾರಣೆಗಾಗಿ ಇವನು ಮಂಡಿಸಿದ ಮೂರನೆಯ ಸುಧಾರಣಾ ವಿಧೇಯಕಕ್ಕೆ ಸೋಲಾಯಿತು. (1785).

ಅರ್ಥಶಾಸ್ತ್ರದ ಜನಕನೆನಿಸಿದ ಆಡಮ್ ಸ್ಮಿತ್ತನ ಬೋಧನೆಗಳನ್ನು ಕಾರ್ಯಾನ್ವಯಗೊಳಿಸಲು ಕ್ರಮ ತೆಗೆದುಕೊಂಡ ಪ್ರಥಮ ರಾಜನೀತಿಜ್ಞ ವಿಲಿಯಂ ಪಿಟ್. 1786 ರಲ್ಲಿ ಈತ ಫ್ರಾನ್ಸಿನೊಂದಿಗೆ ಅನುಕೂಲಕರವಾದ ವಾಣಿಜ್ಯ ಕೌಲೊಂದಕ್ಕೆ ಸಂಧಾನ ನಡೆಸಿದ. ಗುಲಾಮ ವ್ಯಾಪಾರವನ್ನು ರದ್ದುಗೊಳಿಸಲು ವಿಲ್ಬರ್ ಪೋರ್ಸ್ ಮಂಡಿಸಿದ ಸೂಚನೆಗೆ ಕಾಮನ್ಸ್ ಸಭೆಯ ಒಪ್ಪಿಗೆ ದೊರಕಿಸಿಕೊಡಲು ಪಿಟ್ ಪ್ರಯತ್ನಿಸಿದ. ಆದರೆ ಈ ಪ್ರಯತ್ನ ಫಲಿಸಲಿಲ್ಲ (1792). ನೆಪೋಲಿಯನ್ನನ ವಿರುದ್ಧವಾಗಿ 1793 ರಲ್ಲಿ ರಷ್ಯ, ಸಾರ್ಡಿನಿಯ, ಸ್ಪೇನ್, ನೇಪಾಲ್ಸ್, ಪ್ರಷ್ಯ, ಆಸ್ಟ್ರಿಯ, ಮುಂತಾದ ದೇಶಗಳ ಪ್ರಥಮ ಸಮ್ಮಿಲನವನ್ನು ರಚಿಸಿದ. ಫ್ರಾನ್ಸಿನ ವಿರುದ್ಧ ಎರಡನೆಯ ಸಮ್ಮಿಲನ ರಚಿತವಾದ್ದು 1798 ರಲ್ಲಿ. ಐರ್ಲೆಂಡಿನಲ್ಲೆದ್ದ ದಂಗೆಯನ್ನು ನಿವಾರಿಸಿಕೊಳ್ಳಲು 1800-01 ರಲ್ಲಿ ಒಕ್ಕೂಟವನ್ನು ಸಾಧಿಸುವುದರಲ್ಲಿ ಪಿಟ್ ಯಶಸ್ವಿಯಾದ. ಆದರೆ ಇದನ್ನು ಸಾಧಿಸಲಾದ್ದು ರಾಜಕೀಯ ಭ್ರಷ್ಟಾಚಾರದ ಮೂಲಕವೆನ್ನಲಾಗಿದೆ. ಆ ವರ್ಷ ಇವನು ಅಧಿಕಾರಕ್ಕೆ ರಾಜೀನಾಮೆಯಿತ್ತು ಆಡಿಂಗ್ಟನ್ನನ ಸರ್ಕಾರಕ್ಕೆ ಬೆಂಬಲ ನೀಡಿದ. 1803 ರಲ್ಲಿ ಆ ಸರ್ಕಾರ ಫ್ರಾನ್ಸಿನ ಮೇಲೆ ಯುದ್ಧ ಸಾರಿತು. ಅದರ ದೌರ್ಬಲ್ಯ ಪ್ರಕಾಶಕ್ಕೆ ಬಂತು. ಅಂಥ ಸಮಯದಲ್ಲಿ ಪಿಟ್ಟನ ಆಗಮನ ಅನಿವಾರ್ಯವಾಯಿತು 1804 ರಲ್ಲಿ. ಇವನು ಮತ್ತೆ ಅಧಿಕಾರ ವಹಿಸಿಕೊಂಡು ಫ್ರಾನ್ಸಿನ ವಿರುದ್ಧವಾಗಿ ಯೂರೋಪಿನ ಹಲವು ರಾಷ್ಟ್ರಗಳೊಡನೆ ಮೂರನೆಯ ಸಮ್ಮಿಲನವನ್ನು ಸ್ಥಾಪಿಸಿದ (1805). ಸ್ವತ್ತಿನ ತೆರಿಗೆ ಹೆಚ್ಚಿಸಿ, ಸಾಲವನ್ನೆತ್ತಿ, ಸರ್ಕಾರದ ಖರ್ಚುಗಳನ್ನು ತೂಗಿಸಬೇಕಾಯಿತು. ಸಾರ್ವಜನಿಕ ಹಣವನ್ನು ದುರುಪಯೋಗಿಸಿಕೊಂಡಿದ್ದಾನೆಂದು ಇವನ ಮಿತ್ರನೂ ಅಡ್ಮಿರಾಲ್ಟಿಯ ಮುಖ್ಯನೂ ಆದ ಮೆಲ್ವಿಲ್ಲನ ವಿರುದ್ಧವಾಗಿ ಆಪಾದನೆಗಳು ಹುಟ್ಟಿಕೊಂಡವು (1805). ಇವನ ಆರೋಗ್ಯ ಹದಗೆಟ್ಟಿತು. ಸಮ್ಮಿಲನದ ಪಡೆಗಳ ಸೋಲು ಪಿಟ್ಟನ ರಾಜಕೀಯ ಜೀವನಕ್ಕೆ ಮಾರಕವಾಗಿ ಪರಿಣಮಿಸಿತು. 1806 ರಲ್ಲಿ ಪಿಟ್ ತೀರಿಕೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ